Monday, September 28, 2009

ಟ್ರಸ್ಟಿನ ಕಾರ್ಯಾಧ್ಯಕ್ಷರ ನುಡಿ

ನನಗೆ ಹೊಸಗುಂದದ ದೇವಸ್ಥಾನದ ಪುನರುತ್ಥಾನದ ಬಗ್ಗೆ ಮುಂದುವರಿಯಲು ಯಾವುದೇ ವಿಶೇಷ ಪ್ರೇರಣೆ ಅಥವಾ ಅನುಭವ ಆಗದೆ ಇದ್ದರೂ, ಕೆಲವೊಂದು ಸನ್ನಿವೇಶಗಳು ನನ್ನನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕಾರಣವಾದವು. ನಾನು ಮೂಲತಃ ದ.ಕ.ಜಿಲ್ಲೆಯ ಪುತ್ತೂರಿನವನು. ನನ್ನ ಮಡದಿ ಸಾಗರ ಕಡೆಯವರು. ಆದ್ದರಿ೦ದ ನನಗೆ ಈ ಕಡೆಯ ಸ೦ಪರ್ಕ ಉ೦ಟಾಯಿತು. ನಾನು ಮು೦ದೆ ನಿವೃತ್ತನಾದ ಮೇಲೆ ವಾಸವಿರಲು, ಎ೦ಭತ್ತರ ದಶಕದ ಅಂತ್ಯದಲ್ಲಿ ಕೃಷಿಭೂಮಿ ಯ ಹುಡುಕಾಟದಲ್ಲಿದ್ದೆ. ನನ್ನ ಹೆ೦ಡತಿಯ ಹಿರಿಯ ಸಹೋದರಿ ಹೊಸಗುಂದದ ಜಮೀನನ್ನು ನಮಗಾಗಿ ಆಯ್ಕೆ ಮಾಡಿ ಖರೀದಿ ನಡವಳಿಕೆಯನ್ನು ಅ೦ತಿಮಗೊಳಿಸಿ ನಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿದರು. ನಾವು ಈ ಜಮೀನಿನ ಖರೀದಿ ಮತ್ತು ರಿಜಿಸ್ತ್ರಿ ಆದ ನ೦ತರ ಜಾಗಕ್ಕೆ ಹೋಗಿ ಪರಿಶೀಲನೆ ಮಾಡಿರುತ್ತೇವೆ! ಇದು 1991 ರಲ್ಲಿ. 2000 ರಲ್ಲಿ ಹೊಸಗುಂದದ ನನ್ನ ತೋಟದ ಕೊಟ್ಟಿಗೆಯಲ್ಲಿದ್ದ ಎರಡು ಕರುಗಳು ಕಾರಣವಿಲ್ಲದೆ ಅಸು ನೀಗಿದವು, ಹೆಣ್ಣಾಳುಗಳು ಕೆಲಸ ಮಾಡುತ್ತಿದ್ದಾಗ ಯಾವುದೇ ಕಾರಣವಿಲ್ಲದೆ ಪ್ರಜ್ಞೆತಪ್ಪಿ ಬೀಳುವುದು ಮತ್ತು ಸ್ವಲ್ಪ ಗ೦ಟೆಗಳ ನಂತರ ಪ್ರಜ್ಞೆ ಬರುವುದು ಇಂತಹ ಕೆಲವು ಅಸ್ವಾಭಾವಿಕ ಪ್ರಸಂಗಗಳು ನಡೆಯಲು ಆರ೦ಭವಾದವು. ನನ್ನ ಪತ್ನಿ ಮತ್ತು ಅವರ ಅಕ್ಕ ಆಧ್ಯಾತ್ಮಿಕ ಪರಿಣಿತ ಮತ್ತು ಪ೦ಡಿತರಾದ ಶ್ರೀ ಕಟ್ಟೆ ಪರಮೇಶ್ವರ ಭಟ್ಟರನ್ನು ಸ೦ಪರ್ಕಿಸಿ ನಮ್ಮ ಜಾಗಕ್ಕೆ ಭೇಟಿ ಕೊಡಲು ಮತ್ತು ಸಲಹೆ ನೀಡಲು ವಿನ೦ತಿಸಿಕೊ೦ಡರು. ಶ್ರೀ ಕಟ್ಟೆ ಪರಮೇಶ್ವರ ಭಟ್ಟರ ಭೇಟಿಯ ಸಮಯದಲ್ಲಿ ನಾನು ಯುರೋಪು ಪ್ರವಾಸದಲ್ಲಿದ್ದೆ. ಅಲ್ಲಿದ್ದಾಗಲೇ ನನಗೆ ಪತ್ನಿಯಿ೦ದ ಫೋನು ಬಂತು. ಕಟ್ಟೆ ಪರಮೇಶ್ವರ ಭಟ್ಟರ ಸಲಹೆಯ೦ತೆ ನನ್ನ ತೋಟದ ಪಕ್ಕದಲ್ಲಿ ಕಾಡಿನ ನಡುವೆ ಹುದುಗಿರುವ ಪುರಾತನ ಶಿವ ದೇಗುಲ ವನ್ನು ನಾವು ಪುನರ್ ನಿರ್ಮಾಣ ಮಾಡಬೇಕು, ಮತ್ತು ನಮಗೆ ವಿಧಿಲಿಖಿತ ಎ೦ದು ನನಗೆ ತಿಳಿಸಿದಳು. ಆಗ ನಾನು ಮರು ಯೋಚನೆಯಿಲ್ಲದೆ ಕೂಡಲೇ "ಆಯಿತು" ಎ೦ದು ಹೇಳಿದೆ. ಈ ರೀತಿ ಎಲ್ಲವೂ ಶುರುವಾಯಿತು. ಯುರೋಪು ಪ್ರವಾಸದಿಂದ ಮರಳಿದ ಬಳಿಕ ನಾನು ನನ್ನ ತೋಟದ ನೆರೆಹೊರೆಯವರಲ್ಲಿ ಈ ಮೇಲಿನ ವಿಚಾರ ತಿಳಿಸಿದೆ. ಸಾಗರದ ವರದಹಳ್ಳಿಯ ಪರಮ ಪೂಜ್ಯ ಗುರುಗಳಾದ ಶ್ರೀ ಶ್ರೀಧರ ಸ್ವಾಮಿಗಳು ಯಾರಾದರೊಬ್ಬರು ಈ ದೇಗುಲದ ಪುನರುತ್ಥಾನಕ್ಕೆ ಬರುವ ತನಕ ಕಾಯಬೇಕು ಹೇಳಿದ್ದರು ಎ೦ದು ನೆರೆಹೊರೆಯವರು ತಿಳಿಸಿದರು. ಅದರ೦ತೆ "ಆ ವ್ಯಕ್ತಿ" ಯನ್ನು ಗ್ರಾಮಸ್ಥರು ನನ್ನಲ್ಲಿ ಕ೦ಡರು ಮತ್ತು ಸಹಕಾರ ನೀಡಲು ಮು೦ದೆ ಬಂದರು. ಕೂಡಲೇ ನಿತ್ಯಪೂಜೆ, ಶಿವಲಿ೦ಗದ ಸ್ಥಾಪನೆ ಮುಂತಾದ ವಿಚಾರಗಳ ಬಗ್ಗೆ ಕಾರ್ಯ ಮುಂದುವರಿಯಿತು. ನರ್ಮದಾ ನದಿತಟದಿಂದ "ನರ್ಮದಾ ಬಾಣಲಿಂಗ " ವನ್ನು ತರಲಾಯಿತು. ಎರಡು ವರ್ಷಗಳ ಕಾಲ ಎಲ್ಲವೂ ಸುಮುಖವಾಗಿ ನೆರವೇರಿತು. ಏಕಾ ಏಕಿ ಒ೦ದರ ಹಿಂದೊಂದರಂತೆ ಅನೇಕ ಅವಘಡಗಳು ನಡೆದವು. ನನ್ನ ತ೦ದೆ ಪುತ್ತೂರಿನಿ೦ದ ಹೊಸಗುಂದಕ್ಕೆ ದೇವಾಲಯದಲ್ಲಿನ ಧಾರ್ಮಿಕ ಕಾರ್ಯಕ್ಕೆಂದು ಬರುತ್ತಿದ್ದವರಿಗೆ ಅತಿವೇಗದ ಟ್ರಕ್ ಢಿಕ್ಕಿ ಹೊಡೆದು ಅವರು ಸ್ಥಳದಲ್ಲಿಯೇ ಅಸು ನೀಗಿದರು. ನ೦ತರ ಒ೦ದೇ ತಿ೦ಗಳ ಅ೦ತರದಲ್ಲಿ, ದೇವಳದ ಉದ್ದೇಶಕ್ಕೆ ಸ್ಥಾಪಿಸಲಾಗಿದ್ದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ ಎ೦ಬ ದತ್ತಿ ಸಂಸ್ಥೆಯ ಅಧ್ಯಕ್ಷರು ಅಕಾರಣ ಆತ್ಮಹತ್ಯೆ ಮಾಡಿಕೊ೦ಡರು. ಹೇಳಿಕೊಳ್ಳುವಂತಹ ಕಾರಣಗಳಿಲ್ಲದ ಇನ್ನೂ ಕೆಲವು ಆತ್ಮಹತ್ಯಾ ಪ್ರಸಂಗಗಳು ಗ್ರಾಮದಲ್ಲಿ ನಡೆದವು.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಕೇರಳದ ಪ್ರಸಿದ್ಧ ಜ್ಯೋತಿಶಾಸ್ತ್ರ ಪಂಡಿತರಿಂದ ಅಷ್ಟಮಂಗಳ ಪ್ರಶ್ನೆ ಇಡಿಸಲಾಯಿತು. ಜ್ಯೋತಿಷ್ಯ ವಿಜ್ಞಾನದ ರೀತ್ಯ ಈ ದೇಗುಲ ನೂರಾರು ವರುಷಗಳಿಂದ ಅನಾಥವಾಗಿದ್ದು ಶಿಥಿಲಗೊ೦ಡಿತ್ತು. ಅದನ್ನು ಮೊದಲು ಶುದ್ಧೀಕರಣಗೊಳಿಸುವಿಕೆ ಮತ್ತು ಎಲ್ಲಾ ದುಷ್ಟಶಕ್ತಿಗಳಿ೦ದ ಮುಕ್ತಗೊಳಿಸುವಿಕೆ ಜೀರ್ಣೋದ್ಧಾರಕ್ಕೆ ಮುಂಚೆ ಆಗತಕ್ಕದ್ದು. ಈ ಸಂದರ್ಭದಲ್ಲಿ ಮೇಲೆ ಹೇಳಿದ ವಿಧಿವಿಧಾನಗಳನ್ನು ಮಾಡದೇ ಇರುವ ಕಾರಣ ಈ ಎಲ್ಲಾ ಅವಘಡಗಳು ಸ೦ಭವಿಸಲು ಕಾರಣವಾಗಿರಬಹುದು. ಅಲ್ಲದೆ ಜ್ಯೋತಿಷಿಗಳು ಅರಣ್ಯದೊಳಗಿನ ಇನ್ನೂ ಅನೇಕ ಶಿಥಿಲಗೊ೦ಡ ದೇಗುಲಗಳ ಜೀರ್ಣೋದ್ಧಾರ ಕೈಗೊಳ್ಳಬೇಕೆ೦ಬ ಬಲವಾದ ಸಲಹೆಯನ್ನು ಇತ್ತರು. ಅವರ ನಿರ್ದೇಶನದಂತೆ ದೇಗುಲದ ಶುದ್ಧೀಕರಣ ವಿಧಿವಿಧಾನಗಳು ಮತ್ತು ಮುಖ್ಯ ದೇವರು ಮತ್ತು ಪರಿವಾರ ದೇವತೆಗಳಿಗೆ ಬಾಲಾಲಯ ನಿರ್ಮಾಣ ಕಾರ್ಯ ಆರ೦ಭಮಾಡಲಾಯಿತು. ಸದರಿ ಶ್ರೀ ಉಮಾಮಹೇಶ್ವರ ದೇವಾಲಯವನ್ನು ಕಟ್ಟಿಸಿದವರು ಯಾರು ಮತ್ತು ಯಾವಾಗ ಎ೦ಬ ಬಗ್ಗೆ ನಮ್ಮಲ್ಲಿ ನಿಖರ ಮಾಹಿತಿ ಲಭ್ಯವಾಗಿಲ್ಲವಾದರೂ ಸುತ್ತಲ ಪರಿಸರದಲ್ಲಿ ಲಭ್ಯವಾದ ಶಿಲಾಲೇಖಗಳಿ೦ದ ಈ ದೇಗುಲ ಸುಮಾರು 1000 -1100 ವರುಷಗಳಷ್ಟು ಹಳೆಯದೆಂದು ತಿಳಿದುಬಂದಿರುತ್ತದೆ. ಹೊಸಗುಂದ ವನ್ನು ರಾಜಧಾನಿಯನ್ನಾಗಿಸಿ ಸುಮಾರು 300 ವರುಷ ರಾಜ್ಯಭಾರ ಮಾಡುತ್ತಿದ್ದ, ಹು೦ಚದಿ೦ದ ಬಂದ ಶಾ೦ತರ ರಾಜಮನೆತನ ದವರ ಆಳ್ವಿಕೆ ಇಲ್ಲಿತ್ತು ಎ೦ಬ ವಿಚಾರಗಳು ವಿದಿತವಾಗಿವೆ. ಈ ದೇಗುಲದ ತಳಪಾಯವು ಎರಡು ಬದಿ ಮಣ್ಣಿನೊಳಗೆ ಹೂತು ಹೋಗಿ ಶಿಥಿಲಗೊ೦ಡಿತ್ತು ಮತ್ತು ಬಿರುಕು ಬಿಟ್ಟಿತ್ತು. ಅಲ್ಲದೆ ದಕ್ಷಿಣದ ಗೋಡೆಯ ಕಡೆಯಲ್ಲಿ ದೊಡ್ಡ ಮರವೊ೦ದು ಬೆಳೆದು ದೇವಸ್ಥಾನ ಶಿಥಿಲಗೊಳ್ಳಲು ಕಾರಣವಾಗಿತ್ತು. ನಾವು ಶ್ರೀ ಧರ್ಮಸ್ಥಳ ಧರ್ಮೊತ್ತಾನ ಟ್ರಸ್ಟಿನ ಪರಿಣತಿ ಮತ್ತು ಸಹಕಾರ ಪಡೆದು ಹಳೆ ದೇಗುಲವನ್ನು ಬಿಚ್ಚಿ, ಬಿಚ್ಚಿದ ಪ್ರತಿಯೊ೦ದು ಭಾಗಕ್ಕೂ ಸಂಖ್ಯೆ ಕೊಟ್ಟು ತಳಪಾಯವನ್ನು ಪುನರ್ ನಿರ್ಮಾಣ ಮಾಡಿದ್ದು, ಪುನರ್ ಜೋಡಣೆ ಕೆಲಸ ಪ್ರಗತಿಯಲ್ಲಿದೆ. ಹಳೆಯ ದೇಗುಲವನ್ನು ಪೂರ್ಣವಾಗಿ ಬಿಚ್ಚಿ, ಅದು ಹಿಂದೆ ಇದ್ದ ಮಾದರಿಯಲ್ಲಿಯೇ ಪುನರ್ ನಿರ್ಮಾಣ ಮಾಡಿದ ಉದಾಹರಣೆ ವಿಶ್ವದಲ್ಲಿ ಒ೦ದೆರಡು ಇರಬಹುದು . ಆದರೆ ನಾವು ಶ್ರೀ ಉಮಾಮಹೇಶ್ವರ ದೇಗುಲವನ್ನು ಅದರ ಹಿ೦ದಿನ ನಿರ್ಮಿತಿಯಲ್ಲಿ ಇದ್ದ ಅದೇ ವಸ್ತುಗಳನ್ನು ಉಪಯೋಗಿಸಿ ಬಹಳ ಪರಿಶ್ರಮ ವಹಿಸಿ ಶಿಥಿಲಗೊಂಡಿದ್ದ ಭಾಗಗಳನ್ನು ಪರಿಶ್ರಮದಿಂದ ಜೋಡಿಸಿ ಪುನರ್ ನಿರ್ಮಾಣ ಮಾಡುವ ಕಾರ್ಯ ನಡೆದಿದ್ದು, ಪೂರ್ಣಪ್ರಮಾಣದಲ್ಲಿ ಈ ರೀತಿಯ ರಚನೆ, ವಿಶ್ವದಲ್ಲಿಯೇ ಪ್ರಥಮ. ಪುರಾತನ ಐತಿಹ್ಯಗಳ ಪ್ರಕಾರ ದೇವಾಲಯ ಕಟ್ಟುವುದು ಪವಿತ್ರ ಕಾರ್ಯ. ಹಾಲಿ ಇರುವ ದೇಗುಲಗಳನ್ನು ಪುನರುಜ್ಜೀವನಗೊಳಿಸುವುದು ಪುಣ್ಯಕಾರ್ಯ. ಆದರೆ ಶಿಥಿಲಗೊ೦ಡಿದ್ದ ದೇಗುಲಗಳ ಪುನರುತ್ಥಾನಗೊಳಿಸುವುದು ಪರಮ ಪವಿತ್ರ ಕಾರ್ಯ ಮತ್ತು ಅಪರೂಪವಾಗಿ ಲಭ್ಯವಾಗುವ ಅವಕಾಶ. ನಮ್ಮ ದೇಶದ 29 ರಾಜ್ಯಗಳ ಕನಿಷ್ಠ 100008 ಮಂದಿ ಭಾಗವಹಿಸಿ ದೇಣಿಗೆ ನೀಡಿ ಈ ದೇಗುಲ ಪುನರುತ್ಥಾನಕ್ಕೆ ಕೈ ಜೋಡಿಸಬೇಕು ಎ೦ಬುದು ನನ್ನ ಬಯಕೆ, ಈ ದೇವಾಲಯ ನಗರಿಯ ಪುನರ್ ನಿರ್ಮಾಣ ಮಾಡಿ, ಹೊಸಗುಂದವನ್ನು ಶಾ೦ತಿಯ ಧಾಮವನ್ನಾಗಿಸುವುದು ನನ್ನ ದೀರ್ಘಕಾಲೀನ ಉದ್ದೇಶವಾಗಿರುತ್ತದೆ. ಇದನ್ನು ಪ್ರತಿಯೊಬ್ಬರೂ ಭೇಟಿ ನೀಡಲೇಬೇಕಾದ ತಾಣವನ್ನಾಗಿಸಬೇಕು . ಧಾರ್ಮಿಕ ಆಸ್ಥೆ ಉಳ್ಳವರು, ಆಧ್ಯಾತ್ಮಿಕ ಆಸಕ್ತಿ ಉಳ್ಳವರು ಮತ್ತು ಪರಿಸರ ಪ್ರಿಯರು ಮತ್ತು ಶಾಂತಿ ಬಯಸುವವರು - ಹೀಗೆ ಎಲ್ಲರಿಗೂ ಈ ತಾಣ ಪ್ರಿಯವಾಗಬೇಕು ಅನ್ನುವ ಇರಾದೆ ನನ್ನದು.
ಇಲ್ಲಿ ಭೇಟಿ ಕೊಡುವ ಎಲ್ಲರಿಗು ಶಾಂತಿಯನ್ನು ಕೊಡುವುದರಿಂದ ಬಹುಶಃ ಅನಾದಿ ಕಾಲದಲ್ಲಿ ಇಲ್ಲಿ ರಕ್ತ ಹರಿಸಿದ ಮತ್ತು ಈ ಎಲ್ಲಾ ದೇಗುಲಗಳನ್ನು ನಿರ್ಮಿಸಿದ ಮಹನೀಯರಿಗೆ ಆತ್ಮಶಾಂತಿ ಪ್ರಾಪ್ತವಾಗಬಹುದು. ದೇವರಕಾಡು ಬಗ್ಗೆ:1100 ವರುಷಗಳಷ್ಟು ಹಳೆಯ ಸ್ಮಾರಕವಾದ ಶ್ರೀ ಉಮಾಮಹೇಶ್ವರ ದೇಗುಲವನ್ನು ಪುನರ್ ನಿರ್ಮಾಣ ಮಾಡುವ ಬಗ್ಗೆ ಯೋಜನೆಯನ್ನು 2001 ರಲ್ಲಿ ಕೈಗೊ೦ಡ ನ೦ತರ ಒ೦ದು ದಿನ ನಾನು ಮತ್ತು ನನ್ನ ಪ್ರಕೃತಿ ಪ್ರಿಯ ಮಿತ್ರ ದೀಪಕ್ ಸಾಗರ್ (ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕ್ರತ) ಜೊತೆಗೆ ನಾನು ಹೊಸಗುಂದ ಕಾಡಿನ ಪರಿಸರದಲ್ಲಿ ಚಾರಣ ನಿರತನಾಗಿದ್ದಾಗ ಕಾಡಿನ ಒಳಭಾಗದಲ್ಲಿ ಪ್ರಸನ್ನ ನಾರಾಯಣ, ಕಂಚಿ ಕಾಳಮ್ಮ ದೇಗುಲಗಲ ಶಿಥಿಲ ಭಾಗಗಳು ಇರುವುದು ಗಮನಕ್ಕೆ ಬಂತು. ಹೊಸಗುಂದದ ಚಾರಿತ್ರಿಕ ಹಿನ್ನೆಲೆಯನ್ನು ಮನದಲ್ಲಿಟ್ಟುಕೊ೦ಡು ನಾವು ತಿಳಿದುಕೊ೦ಡದ್ದೇನೆ೦ದರೆ, ಹಲವಾರು ದೇವಾಲಯಗಳ ಶಿಥಿಲತೆಯಿ೦ದಾಗಿ ಮತ್ತು ದೇವರ ಶಾಪದ ಭಯದಿಂದ ಈ ರಾಜಧಾನಿ ನಗರಿಯ ಪೂರ್ತಿ ಜನಸ೦ಖ್ಯೆ ಬೇರೆಡೆಗೆ ವಲಸೆ ಹೋಗಿರಬಹುದು. ನೂರಾರು ವರುಷಗಳ ಕಾಲ ಯಾರ ವಾಸವೂ ಇಲ್ಲದೆ ಇಲ್ಲಿ ದಟ್ಟ ಕಾಡು ನಿರ್ಮಾಣವಾಗಿದೆ! ಈ ಅರಣ್ಯ ತು೦ಬಾ ದಟ್ಟ ಕಾಡು ಆಗಿರುವುದರಿ೦ದ ಇದನ್ನು ದೇವರ ಸೃಷ್ಟಿ ಆಗಿರುವುದರಿ೦ದ ನಾವು ಇದನ್ನು ಸ೦ರಕ್ಷಿಸಲು ಮತ್ತು ಕಾಪಾಡಲು "ದೇವರ ಕಾಡು" ಎ೦ದು ಹೆಸರಿಸಲು ತೀರ್ಮಾನಿಸಿದೆವು. ಸರಕಾರೀ ದಾಖಲೆಗಳ ಪ್ರಕಾರ ಆರುನೂರು ಎಕರೆ ವಿಸ್ತಾರದ ಈ ಕಾಡು ಕ೦ದಾಯ ಭೂಮಿ ಎ೦ತಲೇ ಇದೆ. ಅರಣ್ಯ ಇಲಾಖೆಗೆ ಇದನ್ನು ದೇವರ ಕಾಡು ಎ೦ದು ತಿರ್ಮಾನಿಸಲು ಅಧಿಕಾರವ್ಯಾಪ್ತಿ ಇರಲಿಲ್ಲ. ಆದ್ದರಿ೦ದ ನಾವು ಅಂದಿನ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಕಾಗೋಡು ತಿಮ್ಮಪ್ಪ ರನ್ನು ನಮ್ಮ ವಿನ೦ತಿಯೊ೦ದಿಗೆ ಭೇಟಿ ಮಾಡಿದಾಗ ಅವರು ಸಕಾರಾತ್ಮಕ ಸ್ಪಂದನೆ ನೀಡಿದರು. ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಮೂಲಕ ಈ ಅರಣ್ಯ ಪ್ರದೇಶದ ಮೋಜಣಿಗೆ ವ್ಯವಸ್ಥೆ ಮಾಡಿದರು. ಸುಮಾರು ೩ ತಿಂಗಳ ಕಾಲ ನಡೆದ ಈ ಮೋಜಣಿ ಕಾರ್ಯವನ್ನು ನಮ್ಮ ಶ್ರೀ ಉಮಾಮಹೇಶ್ವರ ಟ್ರಸ್ಟ್ ವತಿಯಿ೦ದ ಪ್ರಾಯೋಜಿಸಿ, ಅರಣ್ಯದ ಗಡಿಗುರುತುಗಳನ್ನು ನಿಗದಿಪಡಿಸಲಾಯಿತು. ಅದೇ ಸ೦ದರ್ಭದಲ್ಲಿ ಪ್ರಸಿದ್ಧ ಕೃಷಿ ವಿಜ್ಞಾನಿ ಮತ್ತು ಜಮುನಾಲಾಲ್ ಬಜಾಜ್ ಪ್ರಶಸ್ತಿ ಪುರಸ್ಕೃತ ಪ್ರೊ: ಕಟಿಗೆಹಳ್ಳಿಮಠ ರವರು ಹೊಸಗುಂದಕ್ಕೆ ಭೇಟಿ ನೀಡಿದ ಸಮಯದಲ್ಲಿ ಈ ಕಾಡಿನ ಜಿವವೈಧ್ಯತೆಯ ಸಮಗ್ರ ಅಧ್ಯಯನ ಮತ್ತು ದಾಖಲೀಕರಣ ಮಾಡಬೇಕು ಎ೦ದು ಸಲಹೆಯಿತ್ತರು. ಈ ಸ೦ಬ೦ಧ ನಾವು ಆಗ ಕುವೆ೦ಪು ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದ ಡಾ; ಹಿರೇಮಠ ರವರನ್ನು ಭೇಟಿ ಮಾಡಿದೆವು. ಅವರ ಮಾರ್ಗದರ್ಶನದಲ್ಲಿ ಒಂದು ಸಮಿತಿ ರಚನೆಯಾಯಿತು. ವಿಶ್ವವಿದ್ಯಾಲಯದ ಸಸ್ಯ ವಿಜ್ಞಾನ ವಿಭಾಗದ ಪ್ರೊಫೆಸರುಗಳು, ವಿದ್ಯಾರ್ಥಿಗಳು ಮತ್ತು ಸ೦ಶೋಧನಾರ್ಥಿಗಳು ಈ ಕಾಡಿನಲ್ಲಿ ಪ್ರತಿ ವಾರದ ಕೊನೆಗೆ, ನಾಲ್ಕುತಿ೦ಗಳ ಕಾಲ ಭೇಟಿ ಕೊಟ್ಟು ಅಧ್ಯಯನ ಮಾಡುವ೦ತೆ ನಾವು ಅವಕಾಶ ಮಾಡಿಕೊಟ್ಟೆವು. ಅದರ೦ತೆ ಈ ತ೦ಡ ಸುಮಾರು 350 ಜಾತಿಯ ಗಿಡಮರಗಳನ್ನು ಗುರುತಿಸಿತು. ಇಲ್ಲಿನ ಹೆಚ್ಚಿನ ಮರಗಳ ಪ್ರಾಯ ಸುಮಾರು 300-500 ವರ್ಷಗಳೆ೦ದು ಅ೦ದಾಜು ಮಾಡಲಾಯಿತು. ಒ೦ದು ಜಾತಿಯ ಮಾವಿನ ಮರ 650 ವರುಷ ಹಳೆಯದು! ನಾವು ಈ ಸ೦ಶೋಧನೆಯಿ೦ದ ದೊರಕಿದ ಸಸ್ಯಮಾಹಿತಿ ಮತ್ತು ಇತರೆ ದಾಖಲೆಗಳನ್ನು ತಯಾರಿಸಿ 2002 ರ ಜನವರಿಯಲ್ಲಿ ಬಿಡುಗಡೆಗೊಳಿಸಿದೆವು.
ನನ್ನ ಆ೦ತರ್ಯದಲ್ಲಿರುವ ಉದ್ದೇಶವೆ೦ದರೆ ಈ ದೇವರಕಾಡು ಪರಿಸರ ಪ್ರೇಮಿಗಳ ಮತ್ತು ವಿದ್ಯಾರ್ಥಿಗಳ ಸ೦ಶೋಧನೆಯ ತಾಣವಾಗಬೇಕು, ಇಲ್ಲಿನ ಜೀವವೈವಿಧ್ಯದ ಉನ್ನತಿಯತ್ತ ಕ್ರಮವಹಿಸಬೇಕು ಎ೦ಬ ಆಲೋಚನೆ ನನ್ನಲ್ಲಿ ಬಂತು. ಅದರ೦ತೆ ಈ ಕಾರ್ಯವನ್ನು ಹಾಕಲಾಗುವ ಶ್ರಮ ಸಾರ್ಥಕವಾಗಬೇಕೆ೦ಬ ಉದ್ದೇಶದಿ೦ದ, ಅದಕ್ಕೆ ಪೂರಕವಾಗಿ ನಶಿಸಿಹೋಗುತ್ತಿರುವ, ನಾಶವಾಗಿರುವ ಸಸ್ಯಸ೦ಕುಲಗಳ 108 ಜಾತಿಯ 108 ಸಸ್ಯಗಳ೦ತೆ ಪ್ರತಿವರ್ಷ ಬೇರೆ ಬೇರೆ ಜಾತಿಯ ಗಿಡಗಳನ್ನು ನೆಡುವ ಪ೦ಚವಾರ್ಷಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು! ಮೊದಲು ಮೊದಲಿಗೆ ನಮ್ಮ ಪರಿಣತ ಉಮೇಶ ಅಡಿಗರಿಗೆ ಹೊಸಹೊಸ ಗಿಡಗಳನ್ನು ಸ೦ಗ್ರಹಿಸಿ ಅಭಿವೃದ್ಧಿಗೊಳಿಸುವ ಕಾರ್ಯ ಸುಲಭಸಾಧ್ಯವೆ೦ದು ಅನಿಸಿತು. ಆದರೆ ಈ ವರುಷ ಅ೦ದರೆ ಯೋಜನೆಯ 3 ನೆಯ ವರುಷದಲ್ಲಿ ವಿವಿಧ ಜಾತಿಯ ಸಸಿಗಳ ಹುಡುಕಾಟ ತು೦ಬ ಕಷ್ಟವೆನಿಸಿತು. ಮು೦ಬರುವ ವರ್ಷಗಳಲ್ಲಿ ನಮಗೆ ಇದು ಹರ ಸಾಹಸ ಪಡಬೇಕಾದ ಕಾರ್ಯ ಎ೦ಬ ಅರಿವು ಇದೆ. ಏಕೆ೦ದರೆ ಬೇರೆ ಬೇರೆ ಜಾತಿಯ ಗಿಡಗಳನ್ನು ಹುಡುಕುವುದು ಕಷ್ಟಕರ ವಿಚಾರ. ನೆಟ್ಟ ಗಿಡಗಳ ಪಕ್ಕದಲ್ಲಿ ಅವುಗಳ ವೈಜ್ಞಾನಿಕ ಸಸ್ಯನಾಮ ಮತ್ತು ಸ್ಥಳೀಯ ಹೆಸರನ್ನು ಒಳಗೊ೦ಡ ಸೂಚೀಫಲಕವನ್ನು ಈ ಅರಣ್ಯಪ್ರದೇಶಕ್ಕೆ ಭೇಟಿ ಕೊಡುವ ಎಲ್ಲರಿಗೂ ಸುಲಭವಾಗಿ ಅರ್ಥವಾಗಲು ಸಾಧ್ಯವಾಗುವ೦ತೆ ಸ್ಥಳೀಯ ಭಾಷೆ ಮತ್ತು ಆ೦ಗ್ಲ ಭಾಷೆಯಲ್ಲಿ ಹಾಕುವ ಬಗ್ಗೆ ಶ್ರಮವಹಿಸಲಾಯಿತು. ಈ ವರುಷ ನಾವು ನೆಟ್ಟ ಗಿಡಗಳ ಮೊನೋಗ್ರಾಪ್ (ಕಿರುಪರಿಚಯಪತ್ರ) ಮತ್ತು ಸಸ್ಯಸ೦ಕುಲ ಮಾಹಿತಿಯನ್ನು ದಾಖಲಿಸುವ ಕಾರ್ಯ ಶುರು ಮಾಡಿದ್ದೇವೆ. ಈ ದಾಖಲೆಗಳ ಗ್ರ೦ಥಾಲಯ ಅಧ್ಯಯನಶೀಲರಿಗೆ ಮತ್ತು ಸ೦ಶೋಧನಾರ್ಥಿಗಳಿಗೆ ಬಹಳ ಉಪಯುಕ್ತ. ಸ೦ಪನ್ಮೂಲದ ಕೊರತೆ ಈ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿಗೆ ನಮ್ಮ ಉದ್ದೇಶ ಈಡೇರಿಕೆ ಸ್ವಲ್ಪ ವಿಳ೦ಬವಾಗಬಹುದು!ಮುಂಬರುವ ವರುಷಗಳಲ್ಲಿ ಹಕ್ಕಿಗಳು,ಚಿಟ್ಟೆಗಳು ಮತ್ತು ಕಾಡು ಪ್ರಾಣಿಗಳನ್ನು ಆಕರ್ಷಿಸುವ ದಿಸೆಯಲ್ಲಿ ಇಲ್ಲಿ ಕೆಲವು ಹಣ್ಣು ಮತ್ತು ಹೂ ಬಿಡುವ೦ತಹ ಸಸ್ಯ ಪ್ರಬೇಧಗಳನ್ನು ನೆಡುವ ಬಗ್ಗೆ ವಿಶೇಷ ಆಸಕ್ತಿಯನ್ನು ನೀಡಲಾಯಿತು. ಮಳೆ ಕೊಯ್ಲು :- ಹೊಸಗುಂದ ಮತ್ತು ಸುತ್ತಲ ಪರಿಸರದಲ್ಲಿ ದಟ್ಟ ಕಾಡು ಇದ್ದರೂ ಕೂಡ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿಗೂ ಕೂಡಾ ಪರದಾಡಬೇಕಾದ ಪರಿಸ್ಥಿತಿ ಉ೦ಟಾಗುತ್ತಿದೆ ಎ೦ಬುದು ನ೦ಬಲಿಕ್ಕೇ ಅಸಾಧ್ಯವಾದ ಸಂಗತಿ! ಈ ವಿಷಯ ನನ್ನನ್ನು, ಈ ದಿಸೆಯಲ್ಲಿ ಜಲ ತಜ್ಞರಾದ ಶ್ರೀ ಪಡ್ರೆ, ಶಿವಾನ೦ದ ಕಳವೆ , ಕೆ.ವಿ. ಭಟ್ ಮುಂತಾದವರನ್ನು ಇಲ್ಲಿಗೆ ಕರೆಸಿ ವಿಚಾರ ಸಂಕಿರಣ ನಡೆಸಿ ಸ್ಥಳೀಯ ಜನರಲ್ಲಿ ನೀರಿನ ಅಗತ್ಯತೆ ಬಗ್ಗೆ ಮಾಹಿತಿ ಉಂಟು ಮಾಡುವ ಮತ್ತು ಜಾಗೃತಿ ಉ೦ಟುಮಾಡುವ ಕಾರ್ಯ ನಡೆಸುವ೦ತೆ ಪ್ರೇರೇಪಿಸಿತು. ಮತ್ತೆ ಪುನಃ ಪ೦ಚವಾರ್ಷಿಕ ಯೋಜನೆ, ಕಳೆದ ತಿ೦ಗಳು 3 ನೆ ವರುಷದ ಕಾರ್ಯಕ್ರಮ ನಡೆಯಿತು. ಮಳೆಕೊಯ್ಲು ಬಹಳ ಸರಳ ಕಾರ್ಯವಾಗಿದ್ದು, ಇದನ್ನು ಅನುಸರಿಸುವುದು ತು೦ಬಾ ಸುಲಭ. ಇದಕ್ಕೆ ಹೆಚ್ಚಿನ ಖರ್ಚಿನ ಬಾಬ್ತು ಇಲ್ಲ, ಗರಿಷ್ಠ ಪ್ರಮಾಣದ ನೀರು ನಿಮ್ಮ ಜಮೀನಿನೊಳಗೆ ಇ೦ಗುವ೦ತೆ ಖಾತ್ರಿಪಡಿಸುವುದು ಅಷ್ಟೇ ! ಸರಳವಾದ ಬದು ಮತ್ತು ಕಣಿಯ ರಚನೆ ಇದನ್ನು ನೋಡಿಕೊಳ್ಳುತ್ತದೆ.
ಇದು ಕ್ಷಿಪ್ರ ಫಲಿತಾ೦ಶವನ್ನು ಕೊಡುತ್ತದೆ. ಉದಾಹರಣೆಗೆ, ನಮ್ಮ ದೇವಾಲಯದ ಪರಿಸರದಲ್ಲಿ ನ ಪುಷ್ಕರಣಿ ಡಿಸೆ೦ಬರ-ಜನವರಿ ತಿಂಗಳಲ್ಲಿಯೇ ಬತ್ತಿ ಹೋಗುತ್ತಿತ್ತು. ಮೊದಲ ವರುಷದ ತರಬೇತಿ ಕಾರ್ಯಕ್ರಮದ ನ೦ತರ ನಾವು ದೇವಾಲಯದ ಪರಿಸರದಲ್ಲಿ ಅಲ್ಲಲ್ಲಿ ಇ೦ಗುಗು೦ಡಿ ಗಳನ್ನೂ ಮಾಡಿದೆವು. ಇದರ ಪರಿಣಾಮ ಮುಂದಿನ ಬೇಸಿಗೆಯಲ್ಲಿ ಈ ಪುಷ್ಕರಣಿಯಲ್ಲಿ ಆ ವರುಷದ ಮೇ ತಿ೦ಗಳಲ್ಲಿಯೂ ಕೊಳದಲ್ಲಿ ಸಮೃದ್ಧ ನೀರು ಇತ್ತು. ಮಳೆನೀರು ಕೊಯ್ಲು ಆರ೦ಭ ಮಾಡಿದ ಎರಡನೇ ವರ್ಷದ ತರುವಾಯ ಪುಷ್ಕರಣಿಯಲ್ಲಿ ಮಳೆಗಾಲ ಆರ೦ಭವಾಗುವ ತನಕವೂ ನೀರು ಇತ್ತು. ನನಗೆ ತಿಳಿದ ಮಾಹಿತಿಯ೦ತೆ, ಹೊಸಗುಂದ ಗ್ರಾಮದಲ್ಲಿ ರೈತರು ಸುಮಾರು ಐವತ್ತು ವರ್ಷಗಳ ಹಿ೦ದೆ ಪ್ರತಿ ವರ್ಷ ಎರಡು ಭತ್ತದ ಬೆಳೆ ತೆಗೆಯುತ್ತಿದ್ದರು. ಆದರೆ ಇ೦ದಿನ ಪರಿಸ್ಥಿತಿ ಹೇಗಿದೆಯೆ೦ದರೆ, ನೀರಿನ ತೀವ್ರ ಅಭಾವದ ಕಾರಣ ಒಂದು ಬೆಳೆ ತೆಗೆಯುವುದು ಕೂಡ ದುಸ್ತರವೆನಿಸಿದೆ. ಗತ ಇತಿಹಾಸ ಮರುಕಳಿಸುವ೦ತೆ ಮಾಡುವುದು ನನ್ನ ಮನದಾಳದ ಕನಸು. ಹೊಸಗುಂದದ ಸುತ್ತಲ ಹನ್ನೊಂದು ಹಳ್ಳಿಗಳ ಗ್ರಾಮಗಳ ನಿವಾಸಿಗಳಲ್ಲಿ ಮಳೆಕೊಯ್ಲಿನ ಬಗ್ಗೆ ಅರಿವು, ಇದರ ಮಹತ್ವ ಮತ್ತು ಉಪಯೋಗದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಅಪೇಕ್ಷೆ. ದುರದೃಷ್ಟವಶಾತ್ ಈ ಊರಿನ ಜನರ ಸಹಭಾಗಿತ್ವ ಮತ್ತು ಸ್ಪಂದನೆ ಏನೂ ಸಾಲದು! ಬಹುಶ: ಇದು ಅತಿ ಸರಳ ಮತ್ತು ಕಡಿಮೆ ಖರ್ಚಿನ ಬಾಬ್ತು ಆದ್ದರಿಂದ ಜನರಲ್ಲಿ ಅನಾದರಣೆ ಇರಬಹುದು. ದೇವಾಲಯದ ಸುತ್ತಲ ಪರಿಸರದಲ್ಲಿ ಮಾಡಿದ ಪ್ರಾತ್ಯಕ್ಷತೆ ಮತ್ತು ಅದರಿ೦ದ ಬಂದಿರುವ ಫಲಿತಾ೦ಶದ ಹಿನ್ನೆಲೆಯಲ್ಲಿ, ಮು೦ಬರುವ ದಿನಗಳಲ್ಲಿ ಈ ಭಾಗದ ಜನರ ಸಕ್ರಿಯ ಸಹಕಾರ ನಮಗೆ ಸಿಗಬಹುದು ಎ೦ಬ ಆಶಾಭಾವನೆ ನಮ್ಮದು.

No comments:

Post a Comment